ಗಂಜಾಂ-
ಒರಿಸ್ಸ ರಾಜ್ಯದ ಒಂದು ಜಿಲ್ಲೆ. ಪೂರ್ವ ಘಟ್ಟಗಳಿಗು ಬಂಗಾಳ ಕೊಲ್ಲಿಗೂ ನಡುವೆ ಇರುವ ಜಿಲ್ಲೆಯ ಉತ್ತರದಲ್ಲಿ ಪುರಿ ಜಿಲ್ಲೆಯೂ ದಕ್ಷಿಣದಲ್ಲಿ ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯೂ ಇವೆ.ಪುಲ್‍ಬಾನಿ, ಕೋರಾಪುಟ್ ಇವು ಗಂಜಾಂನ ಪಶ್ಚಿಮಕ್ಕೆ ಇರುವ ಜಿಲ್ಲೆಗಳು. ವಿಸ್ತೀರ್ಣ 4,824 ಚ.ಮೈ. ಜನಸಂಖ್ಯೆ 22,91,667 (1971).

	ಈ ಜಿಲ್ಲೆಯ ವಾಯುವ್ಯ ಮತ್ತು ನೈಋತ್ಯ ತುದಿಗಳಲ್ಲಿ ಸಾಲವೃಕ್ಷಗಳಿಂದ ಕೂಡಿದ ಕಾಡುಗಳುಂಟು. ದಕ್ಷಿಣ ಭಾಗ ಬೆಟ್ಟಗಳಿಂದ ಕೂಡಿದೆ. ಬೆಟ್ಟ ಕಾಡುಗಳಿಲ್ಲದ ಪ್ರದೇಶ ಮೈದಾನ. ಉತ್ತರದಲ್ಲಿ ಅರಣ್ಯದಲ್ಲಿ ಖೋಂಡ್ ಮತ್ತು ದಕ್ಷಿಣದಲ್ಲಿ ಸಾವರ ಬುಡಕಟ್ಟುಗಳ ಜನರಿದ್ದಾರೆ.

	ಗಂಜಾಂ ಪ್ರಾಚೀನ ಕಳಿಂಗ ರಾಜ್ಯದ ಭಾಗವಾಗಿತ್ತು ಈ ಜಿಲ್ಲೆಯಲ್ಲಿ ಹರಿಯುವ ಋಷಿಕುಲ್ಯ ನದಿಯ ದಂಡೆಯ ಮೇಲಿರುವ ಜೌಗಡದಲ್ಲಿ ಅಶೋಕನ ಶಿಲಾಶಾಸನ ಸಿಕ್ಕಿದೆ. ಕ್ರಿ.ಪೂ. 4ನೆಯ ಶತಮಾನದಲ್ಲಿ ಈ ಪ್ರದೇಶವನ್ನು ಸಮುದ್ರಗುಪ್ತ ಗೆದ್ದಿದ್ದ ಮಧ್ಯಯುಗದಲ್ಲಿ ಮಥರ, ಶೈಲೋದ್ಭವ, ಗಂಗ ಮುಂತಾದ ಸಂತತಿಗಳ ರಾಜರು ಇದನ್ನು ಆಳುತ್ತಿದ್ದರು. 16-18ನೆಯ ಶತಮಾನಗಳಲ್ಲಿ ಇದು ಮುಸ್ಲಿಮರ ಆಳ್ವಿಕೆ ಒಳಪಟ್ಟಿತು. 1753ರಲ್ಲಿ ಫ್ರೆಂಚರು ಉತ್ತರ ಸರ್ಕಾರದ ಒಂದಿಗೆ ಅದರ ಭಾಗವಾಗಿದ್ದ ಈ ಪ್ರದೇಶವನ್ನೂ ವಶಪಡಿಸಿಕೊಂಡರು. ತರುವಾಯ ಇದು ಬ್ರಿಟಿಷರ ಕೈವಶವಾಯಿತು. 1768ರಲ್ಲಿ ಅವರು ಗಂಜಾಂ ಬಳಿ ಕೋಠಿಯೊಂದನ್ನು ಸ್ಥಾಪಿಸಿಕೊಂಡರು 1815ರ ವರೆಗೆ ಗಂಜಾಂ ಪಟ್ಟಣವೇ ಗಂಜಾಂ ಜಿಲ್ಲೆಯ ಆಡಳಿತಕೇಂದ್ರವಾಗಿತ್ತು. ಇಲ್ಲಿ ಪದೇ ಪದೇ ಕಾಲರಾ ವ್ಯಾಧಿ ಹರಡುತ್ತಿದ್ದುದರಿಂದ ಬ್ರಿಟಿಷರು ಇದನ್ನು ತ್ಯಜಿಸಿ ಬರ್ಹಾಂಪುರ ಮತ್ತು ಛತ್ರಪುರದಲ್ಲಿ ನೆಲಸಿದರು. ಮದ್ರಾಸ್ ಪ್ರಾಂತ್ಯದಲ್ಲಿ ಗಂಜಾಂ ಜಿಲ್ಲೆಯನ್ನು ಹೊಸದಾಗಿ ರಚಿತವಾದ ಒರಿಸ್ಸ ಪ್ರಾಂತ್ಯಕ್ಕೆ 1936ರಲ್ಲಿ ಸೇರಿಸಲಾಯಿತು. 

	ಗಂಜಾಂ ಜಿಲ್ಲೆಯಲ್ಲಿ ಭಾರಿ ಕೈಗಾರಿಕೆಗಳಿಲ್ಲ. ಅಸ್ಕದಲ್ಲಿ ಸಕ್ಕರೆ ಕಾರ್ಖಾನೆ ಇದೆ. ಹುಮದಲ್ಲಿ ಸಮುದ್ರದ ನೀರಿನಿಂದ ಉಪ್ಪು ತಯಾರಿಸುತ್ತಾರೆ. ನೂಲ್ಗೆ, ನೇಯ ಮುಖ್ಯ ಗುಡಿಸಲು ಕೈಗಾರಿಕೆಗಳು. ಕೃಷಿಯೇ ಇಲ್ಲಿ ಬಹು ಜನರ ಮುಖ್ಯ ಕಸಬು. ಇಲ್ಲಿಯ ನದಿಗಳು ಚಿಕ್ಕವಾದರೂ ಸಣ್ಣ ನೀರಾವರಿ ವ್ಯವಸ್ಥೆ ತಕ್ಕಮಟ್ಟಿಗೆ ಇದೆ. ಬತ್ತ. ಕಬ್ಬು, ದ್ವಿದಳಧಾನ್ಯ, ನೆಲಗಡಲೆ, ಎಳ್ಳು, ಗೋಡಂಬಿ ಮುಖ್ಯ ಬೆಳೆಗಳು.

	ಗಂಜಾಂ ಜಿಲ್ಲೆಯ ಮುಖ್ಯ ಪಟ್ಟಣ ಛತ್ರಪುರ, ಜನಸಂಖ್ಯೆ 10.817 (1971) ಇತರ ದೊಡ್ಡ ಪಟ್ಟಣಗಳು ಬುರ್ಹಾಂಪುರ (1,17,635), ಗೋಪಾಲಪುರ (3,584) ಮತ್ತು ಪರ್ಲಕಿಮೇಡಿ (26,920). ಪರ್ಲಕಿಮೇಡಿ ಒಂದು ಪ್ರಾಚೀನ ಸ್ಥಳ. ಛತ್ರಪುರ ಬುರ್ಹಾಂಪುರಗಳ ಮೂಲಕ ಭಾರತದ ಆಗ್ನೇಯ ರೈಲ್ವೆಯ ಮಾರ್ಗವೊಂದು ಸಾಗುತ್ತದೆ. ಬುರ್ಹಾಂಪುರ ಕಲ್ಕತ್ತ-ಮದರಾಸು ರಾಷ್ಟ್ರೀಯ ಹೆದ್ದಾರಿಯ ಮೇಲಿದೆ. 

	ಗಂಜಾಂ ಜಿಲ್ಲೆಯ ಕಾಲೇಜುಗಳು ಉತ್ಕಲ ವಿಶ್ವವಿದ್ಯಾಲಯದ ಅಧಿಕಾರ ವ್ಯಾಪ್ತಿ ಒಳಪಟ್ಟಿವೆ.    	(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ